ಶ್ರೀರಂಗರಾಯ 1

	ವಿಜಯನಗರದ ಆರವೀಡು ವಂಶದ ರಾಜ (1578-86). ತಿರುಮಲನ ಹಿರಿಯ ಮಗ. ತಿರುಮಲ ತನ್ನ ರಾಜ್ಯವನ್ನು ಮೂರು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ತನ್ನ ಪುತ್ರರನ್ನು ಪ್ರಾಂತ್ಯಾಧಿಕಾರಿಗಳನ್ನಾಗಿ ನೇಮಿಸಿದ್ದ. ಸು. 1571ರಿಂದ ಶ್ರೀರಂಗರಾಯ ಯುವರಾಜನಾಗಿ ತೆಲುಗು ಭಾಗದ ಪ್ರಾಂತ್ಯಾಧಿಕಾರಿಯಾಗಿ 1578ರಲ್ಲಿ ತಿರುಮಲರಾಯನ ಮರಣಾ ನಂತರ ವಿಜಯನಗರ ರಾಜ್ಯದ ಸಾಮ್ರಾಟನಾಗಿ ಪೆನುಗೊಂಡೆ ಯಿಂದ ಆಳಲಾರಂಭಿಸಿದ.

	ಈತನ ಆಳಿಕೆಯ ಪ್ರಾರಂಭದಲ್ಲಿ ಬಿಜಾಪುರದ ಸುಲ್ತಾನ ಅಲಿ ಆದಿಲ್ ಷಾ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಕೋಟೆಯನ್ನು ಪುನಃ ಕಟ್ಟಿದ. ಆ ಪ್ರದೇಶದಲ್ಲಿ ಶಂಕರನಾಯಕನೆಂಬುವನು ವಿಜಯನಗರದ ವಿರುದ್ಧ ದಂಗೆ ಎದ್ದು ಬಿಜಾಪುರದ ಸುಲ್ತಾನನನ್ನು ಆಹ್ವಾನಿಸಿದ್ದ.  ಬಿಜಾಪುರದ ಸುಲ್ತಾನ ಶಿವಮೊಗ್ಗ ಮತ್ತು ಕಡೂರು ಜಿಲ್ಲೆಗಳ ನಾಯಕರನ್ನು ಅಡಗಿಸಲು, ಅವರು ಪೊಗದಿ ಕೊಡಲು ಒಪ್ಪಿದರು. ಅನಂತರ ಬಿಜಾಪುರದ ಸುಲ್ತಾನ ಪೆನುಗೊಂಡೆಗೆ ಮುತ್ತಿಗೆಹಾಕಿದ. ಆಗ ಶ್ರೀರಂಗ ರಾಯ ಗೋಲ್ಕಂಡ ಸುಲ್ತಾನ ಇಬ್ರಾಹಿಂ ಕುತ್ಬ್ ಷಾ ನೊಡನೆ ಸ್ನೇಹ ಬೆಳಸಿ, ಬಿಜಾಪುರದ ಸುಲ್ತಾನನನ್ನು ಹಿಮ್ಮೆಟ್ಟಿಸಿದ. ಇದಾದ ಅನಂತರ ಪುನಃ ಬಿಜಾಪುರದ ಸುಲ್ತಾನ ದಂಡೆತ್ತಿಬಂದು, ಶ್ರೀರಂಗನನ್ನು ಸೋಲಿಸಿ ಸೆರೆಹಿಡಿದನಲ್ಲದೆ ಪೆನುಗೊಂಡೆಯ ಉತ್ತರ ಭಾಗದ ವಿಜಯನಗರ ರಾಜ್ಯವನ್ನೂ ಆಕ್ರಮಿಸಿಕೊಂಡ. ಶ್ರೀರಂಗ ವಿಶೇಷವಾದ ದಂಡ ಕೊಟ್ಟು ಬಿಡುಗಡೆಹೊಂದಿದ. ಪುನಃ ಬಿಜಾಪುರದ ಸುಲ್ತಾನ ದಂಡೆತ್ತಿಬರಲು ಶ್ರೀರಂಗನ ಬಂಧುವಾದ ಬಾರಾಮಹಲ್‍ನ ನಾಯಕ ಜಗದೇವರಾಯ ಅವನನ್ನು ಸೋಲಿಸಿದ.

	ಶ್ರೀರಂಗರಾಯನ ದುರ್ಬಲ ಆಳಿಕೆಯ ಕಾಲದಲ್ಲಿ, ಕರ್ನಾಟಕದ ಭಾಗದಲ್ಲಿ ಹಲವಾರು ಪಾಳೆಯಗಾರರು ತಲೆಯೆತ್ತಲಾರಂಭಿಸಿದರು.  ಕೆಲವು ಸಂದರ್ಭಗಳಲ್ಲಿ ಈ ಪಾಳೆಯಗಾರರು ವಿಜಯನಗರದ ಸಾಮ್ರಾಟನ ಹೆಸರನ್ನು ತಮ್ಮ ಶಾಸನಗಳಲ್ಲಿ ಉಲ್ಲೇಖಿಸಿದರೂ ಅವರ ಆಳಿಕೆ ಹೆಚ್ಚು ಕಡಿಮೆ ಸ್ವತಂತ್ರವಾಗಿಯೆ ಇದ್ದಿತು. ಇವನ ಸಮ್ರಾಟತ್ವ ನಾಮಮಾ ತ್ರದ್ದಾಗಿತ್ತು. ಶ್ರೀರಂಗಪಟ್ಟಣದಲ್ಲಿ ಮಾತ್ರ ಇವನ ತಮ್ಮ ಮೂರನೆಯ ರಾಮರಾಯ ವಿಜಯನಗರದ ಪ್ರತಿನಿಧಿಯಾಗಿ ಮುಂದುವರೆ ದಿದ್ದ. ಆದರೆ ಈತನೂ ಅಣ್ಣನ ನಾಮಮಾತ್ರ ಪ್ರತಿನಿಧಿಯಾಗಿದ್ದ. ಪೆಮ್ಮಸಾನಿ ಪೆದ್ದ ತಿಮ್ಮರಾಜ ಶ್ರೀರಂಗರಾಯನ ಮಂತ್ರಿಯಾಗಿದ್ದ. ಮೊದಲು ಓಬಲ ಅನಂತರ ವೆಂಕಟಪ್ಪನಾಯ್ಡು ದಳವಾಯಿ ಅಥವಾ ಸೇನಾಪತಿಯಾಗಿದ್ದರು.  1586ರಲ್ಲಿ ಶ್ರೀರಂಗರಾಯ ನಿಧನಹೊಂದಿದ.
			
									(ಎ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ